ಅತ್ತಾರ ಅತ್ತು ಬಿಡು ಹೊನಲು ಬರಲಿ...!!
ನಿನ್ನೆ ರಾತ್ರಿನೇ ಯೋಚಿಸಿದ್ದೆ, ಅವಳು ಹಾಗೆ ಮಾಡಬಹುದಾ ಅಂತಾ!! ಈಗಲೂ ಅಷ್ಟೇ ....ಬರೀ ಕಾರಣಗಳು. ಇಷ್ಟು ದಿನದ ಕಾಯುವಿಕೆಗೆ ಕಡೇ ಉತ್ತರವೇನೊ ಅನ್ನೋ ಹಾಗೆ ನಿನ್ನೆ ಸಂಜೆ ಪಾರ್ಕಿನ ಬೆಂಚಿನಿಂದ ಎದ್ದು ಹೋಗಿದ್ದಳು. ನಾನಾದ್ರು ಏನು ಅಂತ ಕೇಳಲಿ. ಅವಳು ಹೇಳುವ ಪ್ರತಿ ಕಾರಣಗಳು ಜೀವನದ ಸೋಲುಗಳ, ನನ್ನ ಅಸಹಾಯಕತೆಯ ಒಕ್ಕಣೆಗಳು, ನಿರಾಕರಿಸುವಂಥವಲ್ಲ, ಒಪ್ಪಿಕೊಳ್ಳುವಷ್ಟು ಧೈರ್ಯ ಉಳಿದಿಲ್ಲ. ಆದರೆ ಒಂದು ನಿಜ, ಅವಳು ನಿನ್ನೆ ಯಾವಾಗಿನಕಿಂತ ಚಂದ ಅನಿಸಿದಳು. ಅದೇ ಕೋಪವಿಲ್ಲದ ಮುಖ, ಕೊಂಕಿಲ್ಲದ ನುಡಿ. ಕಠೋರತೆ ಹತ್ತಿರವೂ ಇಲ್ಲ. ನನ್ನಲ್ಲಿ ಪ್ರೀತಿಯ ಮಾತು ಹೇಗೆ ಹೇಳಿದ್ದಳೊ ದೂರವಾಗುವ ನಿರ್ಧಾರವನ್ನು ಕೂಡ ಹಾಗೆ ಹೇಳಿದಳು. ಯಾಕೆ ಹೀಗೆ ಅಂತಾ ಕೇಳುವ ಮನಸಾದರೂ ಹೇಗೆ ಬಂದೀತು. ಸುಮ್ಮನೆ ಕೇಳುತ್ತ ಕುಳಿತೆ, ಅವಳು ಮುಗೀತು ಅಂತ ಎದ್ದು ಹೋದಾಗ ಪ್ರತಿ ಭೇಟಿಯ ಧನ್ಯತೆಯೊಂದಿಗೆ ನಾನು ಎದ್ದು ಬಂದೆ. ಅವಳ ಮೇಲಿನ ಪ್ರೀತಿ ಕಡಿಮೆಯಾಗಿದೆ ಅನ್ನಿಸಲಿಲ್ಲ. ದೂರುವ ಮಾತು ಕೂಡ ಬರಲಿಲ್ಲ.
ಇವತ್ತು ಕೂಡ ಅಲ್ಲಿಗೆ ಹೋಗಬೇಕು. ತಿರುಗಿ ಬರದ ಅವಳ ದಾರಿ ಕಾಯ್ದು ದುಃಖಿಸಬೇಕು. ಪ್ರೀತಿ ಕಣ್ಣೀರಾಗಿ ಹರಿಯಬೇಕು. ಇದು ಕನಸು ಅಂತ ಕಿವಿ ಚಿಗುಟಿ ತಿಳಿಯಬೇಕು. ಪ್ರತಿ ಸಂಜೆಯ ನೆನಪುಗಳಿಗೊಂದು ತಣ್ಣನೆಯ ವಿದಾಯ ಹೇಳಬೇಕು. ನಾಳೆ ಅದೇ ಪಾರ್ಕಿನ ಬೆಂಚಿನಲ್ಲಿ ಅವಳ ಜೊತೆ ಅಪರಿಚಿತ ಅನಿಸಬೇಕು. ಕಾರಣಕ್ಕೊಂದು ಸ್ನೇಹ, ಬಯಕೆಗೊಂದು ಪ್ರೀತಿಯನ್ನು ಮರೆತು ಮತ್ತೆ ಅವಳ ಕಂಡರೆ ಸೋಲದಿರಬೇಕು. ಇದೆಲ್ಲ ಸಾಧ್ಯವಾ? ಮನಸಿನ ಕಿಡಿ ಸುಡದೆ ಇರುತ್ತದೆಯೆ? ಗೊತ್ತಿಲ್ಲ.
ನಾಳೆ ಹೇಗಿರಬಹುದು? ಇಂದಿನಂತೆಯೆ....ಇಲ್ಲಾ ನಿನ್ನೆಯಂತೆಯೆ?... ಅಥವಾ ಮತ್ತೆ ಹೊಸ ಕನಸುಗಳನ್ನು ಹೊತ್ತು ಹೊಸ ಹಾದಿ ತುಳಿಯಲೆ? ಒಂಟಿತನ ಕಾಡಿದ್ದೇ ಈಗ. ಏನು ಮಾಡಲಿ ಅಂತ. ಪ್ರೀತಿ-ಸ್ನೇಹಕ್ಕಿಂತ ಹತ್ತಿರದ ಸಾಂಗತ್ಯ ಬೇಕಿದೆ. ನನ್ನೊಳಗೆ ನನ್ನೇ ಕಾಣಬೇಕಿದೆ. ಗೂಡಾಗಿದ್ದು ಸಾಕು ರೆಕ್ಕೆಯಾಗಬೇಕಿದೆ.
ಸುತ್ತ ನಿನ್ನಯ ಒಲವು
ಪ್ರೀತಿ ಬೆಳಕೆಲ್ಲ
ಬಲು ದೂರ ಹೊರಟಿಹೆನು
ಕತ್ತಲಿನ ಬೆನ್ನಟ್ಟಿ