Sunday, November 29, 2009

ಅರೆ ಘಳಿಗೆ ಬೇಕು...!

ಮೊದಲೆಲ್ಲ ಅನಿಸ್ತಿತ್ತು, ಮಾತೆಲ್ಲ ಮುಗಿದ ಮೇಲೆ ಉಳಿಯೋದು ಪ್ರೀತಿ ಅಂತ. ಆದ್ರೆ ಅದು ಮೌನ ಕೂಡ ಅಂತ ಈಗ ಮನವರಿಕೆ ಆಗಿದೆ. ಎಷ್ಟು ಗಾಢವಾದ ನಿಶ್ಯಬ್ದ ಅಂದ್ರೆ ನನ್ನ ಉಸಿರೇ ನನಗೆ ಕೇಳಿಸುವಷ್ಟು. ಎದೆ ಬಡಿತಗಳನ್ನು ಎಣಿಸಬಹುದು. ಕಣ್ಣು ಮುಚ್ಚಿ ಯೋಚನೆಗಳಿಗೆ ತಲೆ ಕೋಡೋಣ ಅಂದ್ರೆ ಅದೂ ಖಾಲಿ.


’ಟೈಮ್ ಎಷ್ಟಾಯ್ತು’ ಅಂತ ಪದೇ ಪದೇ ನಿನಗೆ ಕೇಳಿದ್ದೇ ಬಂತು. ಬೇರೆ ಮಾತುಗಳಿಗೆ ಹರಿವೇ ಇಲ್ಲ. ಎನೇ ಹೇಳ್ಬೇಕಂದ್ರೂ ಅದು ನಿನಗೆ ಗೊತ್ತೇ ಇದೆಯಲ್ಲ. ಎಲ್ಲ ಕ್ಷಣಗಳನ್ನ ನಿನ್ನ ಜೊತೆಯಲ್ಲೇ ಕಳೆದಿದ್ದಲ್ಲವೆ? ಈ ನಿಶ್ಯಬ್ದಗಳು ತಾಕಿದಾಗ ಮುಂದೇನು ಎಂಬ ಪ್ರಶ್ನೆ. ಮನಸು ಎಷ್ಟು ತುಂಬಿಕೊಂಡಿದೆ ಅಂದ್ರೆ ಅಲ್ಲಿ ಬೇರೆ ಜಾಗವೇ ಇಲ್ವೇನೊ ಅನಿಸ್ಬೇಕು.


ದಿನ-ರಾತ್ರಿಗಳು ಎಷ್ಟು ನಿರಾಯಾಸವಾಗಿ ಹೋಗ್ತಾ ಇವೆ ಅಂದ್ರೆ ಅಶ್ಚರ್ಯಕ್ಕಿಂತ ಅನುಮಾನವೇ ಜಾಸ್ತಿ. ಇಷ್ಟು ಸಲೀಸು ಅಂತ ಯಾವತ್ತೂ ಅನ್ಕೊಂಡಿರ್ಲಿಲ್ಲ. ಜೀವನ ಅಂದ್ರೆ ಹೋರಾಟ, ಹುಡುಕಾಟ, ದುಃಖ, ಆಯಾಸ ಅಂತೆಲ್ಲ ಅನ್ಕೊಂಡಿದ್ದೆ. ಅದು ಯಾವ್ದೂ ಇಲ್ಲದೇ ಹರಿವ ಜೋರು ನದಿಯಲ್ಲಿ ತೇಲ್ಕೊಂಡು ಹೋದಂಗಿದೆ, ನಿಂತು ಚಿಂತಿಸುವಷ್ಟು ವ್ಯವಧಾನವಿಲ್ಲದೆ!


ಕಳೆದ ಕೆಲವು ವರ್ಷಗಳು ನನ್ನವೇ ಅನ್ನೋವಷ್ಟು ಅಪರಚಿತ. ಬಾಳಿನ ಗುರಿ ಎಷ್ಟು ನಿಖರ ಅಂದ್ರೆ ದಾರಿ ಹುಡ್ಕೊ ಕಾರಣವೇ ಇಲ್ಲ. ಇಟ್ಟ ಪ್ರತಿ ಹೆಜ್ಜೆ ಒಂದೆ ದಿಕ್ಕಿಗೆ. ಮಂಜಿನಲ್ಲಿ ಹೊರಟ ಮೆರವಣಿಗೆ ಬಯಲಿನಲ್ಲಿ ಬಿಸಿಲು ಕಂಡ ಹಾಗೆ. ಮನಸಿನ ತಿಕ್ಕಾಟ, ವಿತಂಡವಾದ, ನಿರ್ಧಾರದ ಜವಾಬ್ದಾರಿ ಕಡೆಗೆ ಬೇಸರಿಕೆಯ ಮುನಿಸಿಗೆ ಕೂಡ ಅರೆ ಕ್ಷಣ ಸಿಗುತ್ತಿಲ್ಲ. ಒಂದೋ ಮನಸೆಲ್ಲ ಬರಿದಾಗಿದೆ, ಇಲ್ಲಾ ಬೇರೆ ಏನೂ ಹಿಡಿಸಲಾರದಷ್ಟು ಅದು ತುಂಬಿ ಹೋಗಿದೆ.


ಪ್ರಶ್ನೆ ಹಾಕಿದಷ್ಟು ವ್ಯವಧಾನ, ಉತ್ತರಗಳಿಗೆ ಇಲ್ವೇನೊ...


ಜೀವನಕ್ಕೊಂದು ಅರ್ಥ ಇರ್ಬೇಕು ನಿಜ, ಆದ್ರೆ ಒಂದೇ ಅರ್ಥ ಇರ್ಬೇಕು ಅಂತೇನೂ ಇಲ್ವಲ್ಲಾ.
ಹೊಸ ಆಯಾಮ ಹುಡುಕಬೇಕಿದೆ, ಅದಕ್ಕೂ ಮುನ್ನ ಒಂದಷ್ಟು ಕ್ಷಣಗಳನ್ನ ಕಾದಿರಿಸಬೇಕಿದೆ.


ಬೂದಿ ಆಗಿದ್ದು, ಸಾಕು ಇನ್ನು ಕೆಂಡವಾಗಬೇಕಿದೆ.....

Thursday, March 19, 2009

ಕೈ ಚಳಕ!!

ಕೆಲವು ದಿನಗಳಿಂದ..ಅಲ್ಲ ಕೆಲವು ತಿಂಗಳಿಂದ ಒಂದು ಅನಿಸಿಕೆ.ಸುಮ್ಮನೆ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತಲೇ ಇದೆ. ಈಗ ನಂದು ಅಂತಾ ಒಂದು ಘಳಿಗೆ ಸಿಗೋದೆ ಕಷ್ಟ. ಅದರಲ್ಲಿಯೇ ಅಳಿದುಳಿದ ಕ್ಷಣಗಳಲ್ಲಿ ಒಮ್ಮೊಮ್ಮೆ ಧುತ್ತನೆ ಬಂದು ಕೈಹಿಡಿದು ಕೂಡಿಸಿಯೇಬಿಡುತ್ತದೆ.

ಹಾಗೆ ಹೇಳ್ಬೆಕು ಅಂದ್ರೆ ಅಲ್ಲಿ ಇದ್ದಿದ್ದು ಮರಳು ದಿನ್ನೆ, ಉಪ್ಪು ನೀರು, ಅದೆಷ್ಟೋ ಜನಕ್ಕೆ ಒಂದು ಸಂಜೆ. ಶನಿವಾರ ಬೆಳಿಗ್ಗೆಯಿಂದ ಊರು ಸುತ್ತಿದ್ರೂ ನೀನು ಜೊತೆಗೆ ಅಂತ ಸಿಕ್ಕಿದ್ದು ಅರೆ ಕ್ಷಣದ ನೋಟದಲ್ಲಿ, ಈಗ ಅದೂ ಕಾಣದ ಕತ್ತಲೆ. ಪ್ರೀತಿ ಜೊತೆಗಿದ್ರೆ ಮೈಯೆಲ್ಲ ಬಿಸಿ, ಅದು ಇದು ಅಂತಾರೆ. ನನಗೆ ಮಾತ್ರ ಗಾಳಿ ಸೊಕಿದಲ್ಲೆಲ್ಲ ಚಳಿ, ಮಾತು ನಡುಗುವಷ್ಟು.

ಹೆಜ್ಜೆ ನೋಡ್ತಾ ನಡೀತಿದ್ರೆ ಜನರ ಗದ್ದಲ, ಬಿಡದೇ ಹೊಡೆಯುವ ಅಲೆಗಳು, ಕೊನೆಗೆ ನಿನ್ನ ಇನಿದನಿಯ ಮಾತೂ ಕೇಳದಷ್ಟು ನಿಶ್ಯಬ್ದ. ಉರುಳುವ ಪ್ರತಿ ಕ್ಷಣಗಳನ್ನು ಅದೆಷ್ಟು ಶ್ರದ್ಧೆಯಿಂದ ಎತ್ತಿಕೊಳ್ತಾ ಇದ್ದೆ ಅಂದ್ರೆ ನನಗೇ ಆಶ್ಚರ್ಯ. ಮನಸಿನಲ್ಲಿ ಹುದುಗಿರುವ ನೂರಾರು ಅರಿವಿರದ ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನ. ನಿನಗೆ ಅದು ಗೊತ್ತಾಗದೆ ಇರಲಿ ಅನ್ನೊ ಸಣ್ಣ ನಿವೇದನೆ. ಹೆಜ್ಜೆಗಳು ಜೊತೆ ಆದ ಹಾಗೆ ಸಮಯಕ್ಕೆ ಅರಿವೇ ಇದ್ದಿಲ್ಲ.

ಅದು ಯಾವ ಘಳಿಗೆಯೊ, ಇನ್ನೂ ನೆನಪಾಗುತ್ತಿಲ್ಲ, ನಮ್ಮ ಕೈಗಳು ಬೆಸೆದುಕೊಂಡಿದ್ದವು. ಸ್ನೇಹದ ಆರ್ದ್ರತೆಗೋ ಅಥವಾ ಅದನ್ನೂ ಮೀರಿದ ಧನ್ಯತಾ ಭಾವಕ್ಕೊ! ದಿನ ಮುಗೀತಾ ಇರೊ ಸಂಕಟ ಹೆಚ್ಚಿದ್ದು ಆಗಲೇ. ಕೆಲವೊಮ್ಮೆ ಅನಿಸುತ್ತೆ, ಪ್ರೀತಿ ಹುಟ್ಟಿದ್ದು ಆಗಲೇ ಅಂತ. ಅರ್ಥ ಆಗ್ಲಿಕ್ಕೆ ಅದೆಷ್ಟೋ ಸಂಜೆಗಳು ಬೇಕಾದವು ಅಷ್ಟೇ.

ಬರೆಯುವುದು ಹೇಗೆ!!?

ಜೀವನದ ಪ್ರತಿ ಅಯಾಮದಲ್ಲಿ ನಿನ್ನ ನೆರಳು ಅದೆಷ್ಟು ತುಂಬಿದೆ ಅಂದರೆ ನೀನಿಲ್ಲದ ಕ್ಷಣಗಲು ಅಪರಿಚಿತವಾಗಿವೆ. ಕಾಯುವಿಕೆಯಲ್ಲಿ ಕಳೆದ ರಾತ್ರಿಗಳು, ಕಣ್ಣಲ್ಲಿ ಆರದ ಪಸೆ, ನಕ್ಕಾಗ ಬಿಟ್ಟ ನಿಟ್ಟುಸಿರು, ಸುಮ್ಮನೆ ಮೈಮೇಲೆ ಬಿದ್ದು ಕಾಡುವ ಒಂಟಿತನವೆಲ್ಲ ನಾ ಬರೆದ ಪದಗಳ ಸಾಲುಗಳಲ್ಲೇ ಉಳಿದಿವೆ. ನನ್ನನ್ನು ಇಷ್ಟು ಆವರಿಸಿಕೊಳ್ಳುತ್ತೀಯಾ ಅಂತ ಗೊತ್ತಿತ್ತು, ಆದರೆ ನನ್ನನ್ನೇ ಮರೆಯುತ್ತೇನೆ ಅಂದು ಕೊಂಡಿರಲಿಲ್ಲ. ಪ್ರೀತಿ ಹೆಪ್ಪುಗಟ್ಟುವುದು ಹೀಗೆ ಏನೊ.

ಲೇಖನಿಗೆ ಸಾಲಿತ್ತು
ಪ್ರತಿ ಕ್ಷಣಕ್ಕೊಂದು ವಿರಾಮ
ನೆನಪಲ್ಲೆ ಸಾಗಿತ್ತು
ಕನಸುಗಳ ಸಂಭ್ರಮ

ಮಾತೆಲ್ಲ ಮರೆತಿತ್ತು
ಅರ್ಥವಿಲ್ಲದ ಮೌನ
ಕಾರಣವೇ ಬೇಕಿತ್ತು
ಹುಸಿ ಮುನಿಸಿಗೂ ಕೂಡ

ನೀ ಬಂದೆ ಏನಿತ್ತು
ಹರಿವಿರದ ಜೀವನ
ಚಿಗುರೊಡೆದು ಮರೆತಿತ್ತು
ಬೇಸಿಗೆಯ ಮುನ್ನ

ಮುಂಜಾನೆ ಮೋಡ
ಸಂಜೆಗೊಂದು ತುಂತುರು
ದಿನವೆಲ್ಲ ಹಸಿರೆ
ಮನಸೆಲ್ಲ ತಂಪು

ಎದೆ ಗೂಡಿನ ತುಂಬ
ನಿನದೆ ಚಿತ್ತಾರ
ಪದಗಳೆಲ್ಲ ಮರೆತು
ಬರಲಾರವು ಹತ್ತಿರ

ಬರೆದಿದ್ದೆಲ್ಲ ಮೌನಕ್ಕೆ ಮುಗಿದಿವೆ, ಮಾತುಗಳಿಗೆ ಹುಡುಕಬೇಕು.

Thursday, February 22, 2007

ಇದೇ ಮೊದಲಾ..!!

ಮನಸ್ಸಿಗೊಂದು ನೆಮ್ಮದಿ, ಇಷ್ಟು ಸರಾಗವಾಗಿ ಇಷ್ಟೊಂದು ಹೇಗೆ ಆಗ್ತದೋ ಅಂತ ಒಂದು ಆತಂಕ ಇದ್ದೇ ಇತ್ತು.
ಮನಸ್ಸು ಅಷ್ಟೊಂದು ಭಾವನೆಗಳಿಗೆ ಹೇಗೆ ಸ್ಪಂದಿಸ್ತೋ.. ಲೆಖ್ಖ ಹಾಕುವಷ್ಟರಲ್ಲಿ ಮತ್ತೆ ಅಲ್ಲಿಂದ ದೂರ....

ನೆನಪುಗಳ ಹೆಕ್ಕಿಕೊಳ್ತಾ ಕುತ್ಗೊಂಡಿದೀನಿ.


ನಿನ್ನ ಯಾವಾಗ ನೋಡ್ತೀನೊ ಅನ್ನೊ ಧಾವಂತದಲ್ಲಿ ನಿನ್ನೆಡೆಗೆ ಬಂದಿದ್ದೆ. ನಿನ್ನಲ್ಲೆ ಉಳಿದುಕೊಂಡು ಬಿಟ್ಟೆ.
ಬಿಟ್ಟು ಬರುವಾಗ ಮನಸೆಷ್ಟು ರೊಚ್ಚಿಗೆದ್ದಿತ್ತು ಅಂದ್ರೆ, ಎನು ಮಾಡ್ಬೇಕು ಅಂತಾ ಹೊಳೀತಾನೆ ಇದ್ದಿಲ್ಲ.
ನಿನ್ನ ಜೊತೆ ಕಳೆದ ಕೆಲವು ಕ್ಷಣಗಳು ಅದೆಲ್ಲೊ ಕನಸಿನಲ್ಲಿ ನಡೆದಂಗಿದೆ.

ಮತ್ತೆ ರಾತ್ರಿಯ ಒಂಟಿತನದ ಎಕತಾನತೆಯ ನಿಶ್ಯಬ್ದ ಮಗ್ಗುಲುಗಳು. ನಡೆವ ದಾರಿಯಲ್ಲಿ ಜೊತೆ ಅರಸುವ ತಣ್ಣನೆ ಕೈಗಳು.
ನಿಟ್ಟುಸಿರಾಗಿದ್ದಕ್ಕೆ ಕಣ್ಣೀರೆ ಲೆಖ್ಖ ಇಡಬೇಕು...

ಒಂದು ಕ್ಷಣ ನೀನೆ
ಸುತ್ತ ಮತ್ತೇನಿದೆ

ನಾನು ಹುಡುಕುತಲಿದ್ದೆ
ನೀನೆಲ್ಲೊ ನಕ್ಕಂಗಿತ್ತು
ಕತ್ತಲೆ ತುಂಬಿದೆ
ತಾಕಿದ್ದು ನಿನ್ನ ಉಸಿರಾ..?

ಮೈಯಲ್ಲಿ ಸಣ್ಣ ನಡುಕು
ಬೆವೆತಷ್ಟೂ ಚಳಿ
ಸಣ್ಣಗೆ ಹೊರಳಿ
ನಿನ್ನ ತಡವುತ್ತೇನೆ

ಸಿಕ್ಕಷ್ಟು ಖಾಲಿ
ತಬ್ಬಿಕೊಳ್ಳೋಕೆ ಏನಿತ್ತು
ನೆನಪೊಂದು ತಣ್ಣಗೆ
ಕಣ್ಣೀರಾಗಿತ್ತು

ಹೇಗನಿಸುತ್ತದೆ ಈಗ
ಕಳೆದಿದ್ದು ಸಿಕ್ಕಂಗಾ
ಅದಕ್ಕೆಲ್ಲ ಲೆಖ್ಖವಿಲ್ಲ
ಕಳೆದಿದ್ದೆಷ್ಟು..?

.......

Friday, November 10, 2006

ಇಂದು ಮುಂಜಾವಿನಲಿ!!!!

ಈಗೆಲ್ಲ ಚಳಿ ಜಾಸ್ತಿ. ಮುಸುಕು ಹಾಕಿ ಮಲಗಿದಷ್ಟು ಕನಸು ಮುದ್ದುಗರೆಯುತ್ತವೆ. ಮುಂಜಾನೆಯ ಸೂರ್ಯನ ತಿಳಿಬಿಸಿಲು ನಿನ್ನ ಬಿಸಿ ಅಪ್ಪುಗೆಯ ನೆನಪಾಗಿಸುತ್ತದೆ.

ಮುಂಚೆ ಎಲ್ಲ ನಿದ್ದೆ ಬಿಟ್ಟು ಏಳೋದು ಅಂದ್ರೆ ಕಿರಿಕಿರಿಯೆ. ಆದರೆ ಈಗೆಲ್ಲ ಅದೊಂದು ಸಂಭ್ರಮ ಅನಿಸುತ್ತದೆ. ಆ ಮಂಜು ಮುಸುಕಿದ ದಾರಿಯಲ್ಲಿ ಸುಮ್ಮನೆ ನಡೆದಾಡುವಾಗೆಲ್ಲ ನಿನ್ನ ಉಸಿರಿನ ಸ್ಪರ್ಷ ಅದೆಷ್ಟು ಬಾರಿ ಕಚಗುಳಿ ಇಟ್ಟಿದೆಯೋ!!

ಹುಲ್ಲು ಹಾಸಿನ ಮೇಲೆ ನಲಿವ ಆ ಇಬ್ಬನಿಯ ಕಣಗಳೆಲ್ಲ ನಿನ್ನ ನಗುವಾಗಿ ಮಿನುಗುತ್ತವೆ. ಆ ಹರಿವ ಝರಿ ಮಾಡುವ ಕಲರವ ನಿನ್ನ ಮಾತಾಗುತ್ತದೆ. ನಡೆಯುವ ಆಯಾಸವನ್ನೆಲ್ಲ ನಿನ್ನ ಹೆಗಲಿಗೊರಗಿಸಿ ಬಿಸಿಲು ಕಾಯಿಸುತ್ತೇನೆ.


ಇವತ್ತು ಬೆಳಿಗ್ಗೆ ಏಳ್ತಾ ಇದ್ದಂಗೆ ಒಂದು ಕನಸು! ದೂರದಲ್ಲೆಲ್ಲೊ ಸಾಗರದ ಅಲೆಗಳ ಅಬ್ಬರ. ಕಾಡಿನ ಕಾಲು ದಾರಿಯಲ್ಲಿ ನಿನ್ನ ಜೊತೆ ನಡೆಯುತ್ತಿರುವ ಹಾಗೆ. ನೀನು ಗಿಡ ಮರ ತೋರಿಸುತ್ತ ಮುನ್ನಡೆಯುತ್ತ ಇದ್ದೆ. ನಾನು ನಿನ್ನ ಹೆಗಲ ಮೇಲೆ ನನ್ನ ಎರಡೂ ಕೈ ಇಟ್ಟು ನಿನ್ನ ಹಿಂಬಾಲಿಸ್ತಾ ಇದೀನಿ. ನೀನು ಹಿಂದೆ ತಿರುಗಿದಾಗಲೆಲ್ಲ ನಿನ್ನ ಗಲ್ಲದ ಸ್ಪರ್ಷದಿಂದ ನನ್ನ ಕೈ ನವಿರೇಳುತ್ತಿದೆ. ಸುಮ್ಮನೆ ನಿನ್ನ ಹಾಡಿನ ಗುನುಗು ಮನಸೆಲ್ಲ ತುಂಬುತ್ತಿದೆ. ಆ ದಾರಿ ಕೊನೆಯಿಲ್ಲದಂತೆ ಹರಿಯುತ್ತಿದೆ. ಕಣ್ಣು ತೆರೆದು ಕನಸನರಿಯುವ ಮನಸಾಗುತ್ತಿಲ್ಲ.

ಇದು ಹೀಗೆ ಇರಲಿ!!

Thursday, September 14, 2006

ಒಂದು ಮೀಟಿಂಗ್ ಬೆನ್ನತ್ತಿ......!!!!

ಬೆಳಿಗ್ಗೆಯಿಂದ ಒಂದು ಮುನಿಸು..ಅಸಹನೆ.... ಊರೆಲ್ಲ ಮೋಡ ಹಾಕಿದ್ರು ಮಳೆ ಮಾತ್ರ ನನ್ನ ಮೇಲೇನೆ!

ಅವಸರದಿಂದ ಎದ್ದಾಗ ಎಂಟು ಗಂಟೆ ಆಗಿದ್ದು....ಮೀಟಿಂಗ್ ಇರೋದು ..ನನಗೆ ಲೇಟ್ ಆಗಿದ್ದು..ಎಲ್ಲ ಒಮ್ಮೆಗೆ ಹೊಳೀತು.

ಆದಷ್ಟು ಬೇಗ ಸ್ನಾನ ಮಾಡಿ .ರೆಡಿ ಆಗಿ ಬಸ್ ನಂಬರ್ 135 ಹತ್ತಿದಾಗ ಮಳೆಗೆ ಅರ್ಧ ನೆನೆದಿದ್ದೆ

ಬಸ್ ನಲ್ಲಿರೊ ಎಸಿಯಿಂದ ಪೂರ ನೆನೆದು ನಡುಗೋಕೆ ಶುರು ಮಾಡಿದೆ...

ಮೀಟಿಂಗ್ ನಲ್ಲಿ ಏನೇನು ಹೇಳ್ಬೇಕು ಅಂತ ಮನಸನಲ್ಲೇ ಅಂದ್ಕೊತಿದ್ದ ಹಾಗೆ ಯಾಕೋ ಬಸ್ ಮುಂದೆ ಹೋಗವಲ್ದಲ್ಲ ಅಂತ ಹೊರಗೆ ನೋಡಿದೆ..

ಮೊದಲೇ ಡಬಲ್ ಸೈಜ್ ಬಸ್..ಟ್ರಾಫಿಕ್ ಜಾಮ್ ನಲ್ಲಿ ಕತ್ರಿ ಹಾಕ್ಕೊಂಡು ನಿಂತಬಿಟ್ಟಿತ್ತು.

ಹೊರಗಡೆ ಬಂದು ದೂಡಿ ಮುಂದೆ ಹೋಗ್ಸೊನಾ ಅನ್ನೊವಷ್ಟು ಸಿಟ್ಟು ಬಂತು..

ಬಸ್ ನಲ್ಲಿ ಇರೋರಿಗೆ ಏನು ಅನಿಸ್ತಾ ಇಲ್ವೆ....ಒಬ್ರು ಪಪೆರ್ ಒದ್ತಿದ್ರೆ..ಒಬ್ರು ಹಾಡು ಕೇಳ್ತಾ ಇದಾರೆ

ಕೆಲವರಿಗೆ ಸುಡೊಕು ಹುಚ್ಚು..ಮೆಕ್-ಅಪ್ ಕೂಡ ಇಲ್ಲೆ

ಛೆ! ಯಾರಿಗೂ ಆಫಿಸ್ ಬಗ್ಗೆ ಅವಸರಾನೆ ಇಲ್ವಾ ಅನಿಸ್ತು..!!??!!

ಅಂತು ಇಂತು...ಓಲಾಡಿ ತೇಲಾಡಿ ನಾನಿಳಿಯೋ ಬಸ್ ಸ್ಟಾಪ್ ಗೆ ಬಂದಾಗ....ವಾಚ್ ಮುಳ್ಳು ನಾನು ಲೇಟ್ ಅಗಿದೀನಿ ಅಂತಾ ಕನ್ಫರ್ಮ್ ಮಾಡ್ತು....

ಇನ್ನೇನೂ ಮಾಡೋಕೆ ಆಗಲ್ಲ ..ಹೆಂಗಾದ್ರು ಲೇಟ್ ಆಗಿದೆ ..ಅರಾಮ ಆಗಿ ಹೋಗೋಣ ಬಿಡು ಅಂದ್ರೆ..ಆ ಧಡಿಯಾ ಹೆಗಲಿಗೆ ಹಾಯ್ಕೊಂಡೆ ಹೋಗೋದಾ?

ಈ ಜನಕ್ಕೆ ಯಾಕಿಷ್ಟು ಅವಸರಾ ಅಂತಾ!!??!! ವಿಚಿತ್ರ ಅಲ್ವಾ!!!

ಹೇಗೊ ಮಾಡಿ ಆಫಿಸ್ ಸೇರ್ಕೊಂಡಾಗ ಗೊತ್ತಾಯ್ತು..... ಮೀಟಿಂಗ್ ಇನ್ನು ನಡೀತಾ ಇದೆ ಅಂತಾ..ಸದ್ದಿಲ್ಲದೆ ಹೋಗಿ ಸೇರ್ಕೊಂಡೆ...

ಕಲೀಗು ಗೊಣಗ್ತಾ ಇದ್ದಾ..'ಎನ್ ಕೊರೀತಾನಯ್ಯ ಈ ಮ್ಯಾನೆಜರ್! .ಸುಮ್ಮನೆ ಮನೆಯಲ್ಲಿ ಮಲಗಿದ್ರೆ ಚೆನ್ನಾಗಿತ್ತು '...ಅಂತಾ


ನಾನೂ ಸಣ್ಣದಾಗಿ ಆಕಳಿಸಿ ಮ್ಯಾನೆಜರ್ ಹೇಳೊದನ್ನ ವೇದ ವಾಕ್ಯ ಅನ್ನೋ ಥರ ಕೇಳ್ತಾ ಕೂತೆ....ಇನ್ನು 5 ನಿಮಿಷ ತಾನೆ..!!!!

Saturday, September 09, 2006

ಪ್ರೀತಿಯೊಂದಿಗೆ!!!!!

ನೀನಂದ್ರೆ ಇಷ್ಟ!!!!!


ನಿನಗೆ ಬರೆಯುವ ಪ್ರತಿ ಸಾಲು ಹೇಳೊದು ಅದೇ.




ಈ ಕೆಲವು ತಿಂಗಳು ಹೇಗೆ ಕಳೆದೆ ಅಂತಾ ಗೊತ್ತು...... ಇನ್ನು ಬರುವ ತಿಂಗಳುಗಳ, ದಿನಗಳ ಅಸಂಖ್ಯ ಕ್ಷಣಗಳನ್ನ ಹೇಗೆ ಕಳೀಲಿ ಅಂತ ಚಿಂತೆ!!



ದಿನ ಕಳೆದಂತೆ ನಿನ್ನ ಕಾಣುವ ಬಯಕೆ, ಮುದ್ದಿಸುವ ಹಂಬಲ, ಸುಮ್ಮನೆ ಜೊತೆಯಲ್ಲಿ ಇರುವ ಆಸೆ, ನಟ್ಟಿರುಳ ರಾತ್ರಿಯಲ್ಲಿ ಅಪ್ಪುಗೆಯ ಆಳದಲ್ಲಿ ಬಚ್ಚಿಡ ಬೇಕೆಂಬ ತವಕ....ಹೀಗೆ ಏನೆಲ್ಲ ಮನಸಿನಲ್ಲಿ ಬೆಳೀತಾನೆ ಇವೆ. ನಿಟ್ಟುಸಿರಾಗಿ ಮತ್ತೆ ಅಂದುಕೊತೇನೆ ಇನ್ನೆಷ್ಟು ದಿನ ಹೀಗೆ, ನಾಳೆ ನಿನ್ನೆಗಿಂತ ಬೇಗ ಬರ್ತದೆ ಅಂತ.



ಕೆಲವೊಮ್ಮೆ ಮನಸು ಎಷ್ಟೊ ದಿನಗಳ ಮುಂದಿನ ಘಳಿಗೆಯನ್ನ ನೆನೆಸಿ ಕಚಿಗುಳಿಯಾಗುತ್ತದೆ. ಈ ಕಾಯುವಿಕೆಯಲ್ಲೂ ಒಂದು ಸವಿ ಇದೆ ಅಲ್ವಾ.....



ನಿನ್ನ ಬೆಳಗು ನನ್ನಿಂದ.....ನನ್ನ ಬೆಳಗು ನಿನ್ನಿಂದ ಶುರು ಆಗುವ ರೀತಿ ಮನಸಿಗೆ ಅದೆಷ್ಟು ಖುಶಿ ಕೊಡತ್ತೆ ಗೊತ್ತಾ ಮೆತ್ತನೆಯ ಹಾಸಿಗೆಯ ನುಣುಪಿನಲ್ಲಿ ಸದಾ ನಿನ್ನದೊಂದು ಬಿಸಿ ಉಸಿರು ಬೆಚ್ಚನೆ ಮಲಗಿರುತ್ತದೆ...ತಬ್ಬಿ...ಮುದ್ದಿಸಿ....ಕಾಡಿಸಿ ನನ್ನ ಕನಸಿಗೊಂದು ಮುನ್ನುಡಿ ಹಾಕುತ್ತೇನೆ. ನಾಳಿನ ಬೆಳಗು ಮತ್ತೆ ನಿನದೆ.



ಮಾತು ಹೇಳಿದಷ್ಟು ಕಡಿಮೆ....ಕೇಳಿದಷ್ಟು ಕಡಿಮೆ....ಸುಮ್ಮನೆ ನಿನದೊಂದು ನಗು....ಮುನಿಸು...ಪ್ರೀತಿಯ ಮಾತು...ನಿನ್ನ ಮೆಚ್ಚಿನ 'ಟೈಟ್ ಹಗ್ಗು!' .. ಹುಹ್! ಪ್ರೀತಿ ಅಂದ್ರೆ ಇದೇನಾ???





ಬರಿ ನಿನ್ನೆಯ ನೆನಪಲ್ಲಿ ನಾಳೆಯ ಕನಸಲ್ಲಿ ಜೀವಿಸುತ್ತಿದ್ದ ನನಗೆ ..ಇಂದಿನ ಪ್ರೀತಿ ಹುಟ್ಟಿಸಿದವಳು ನೀನೇ ಅಲ್ವ.. ದಿನದ ಬೇಸರದಲ್ಲಿ ಮನಸು ಪಿಚ್ಚೆನಿಸಿದಾಗ ನಿನ್ನ ಮಾತಿನ ಆಳದಲ್ಲಿ ಕಳೆದು ಎಲ್ಲ ಮರೆಯುತ್ತೇನೆ....

ಮತ್ತೆ ಎರಡು ನೆನಪು ಹೆಗಲೇರುತ್ತವೆ..ಮೂರು ಹೊಸ ಕನಸಿನೊಂದಿಗೆ!!!!

ಯಾವಾಗಲೂ ಹೀಗೆ!!


ನಾಗ್ತಿ ಬರೆದಿರೊ ಹಾಡು ನೆನಪಿಗೆ ಬರತ್ತೆ....

ಬಾಳೆಂದರೆ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನೆಪೆಂದರೆ ಮಳೆಬಿಲ್ಲ ಛಾಯೆ!!!!!!.....

Saturday, July 29, 2006

ಅತ್ತಾರ ಅತ್ತು ಬಿಡು ಹೊನಲು ಬರಲಿ...!!

ನಿನ್ನೆ ರಾತ್ರಿನೇ ಯೋಚಿಸಿದ್ದೆ, ಅವಳು ಹಾಗೆ ಮಾಡಬಹುದಾ ಅಂತಾ!! ಈಗಲೂ ಅಷ್ಟೇ ....ಬರೀ ಕಾರಣಗಳು. ಇಷ್ಟು ದಿನದ ಕಾಯುವಿಕೆಗೆ ಕಡೇ ಉತ್ತರವೇನೊ ಅನ್ನೋ ಹಾಗೆ ನಿನ್ನೆ ಸಂಜೆ ಪಾರ್ಕಿನ ಬೆಂಚಿನಿಂದ ಎದ್ದು ಹೋಗಿದ್ದಳು. ನಾನಾದ್ರು ಏನು ಅಂತ ಕೇಳಲಿ. ಅವಳು ಹೇಳುವ ಪ್ರತಿ ಕಾರಣಗಳು ಜೀವನದ ಸೋಲುಗಳ, ನನ್ನ ಅಸಹಾಯಕತೆಯ ಒಕ್ಕಣೆಗಳು, ನಿರಾಕರಿಸುವಂಥವಲ್ಲ, ಒಪ್ಪಿಕೊಳ್ಳುವಷ್ಟು ಧೈರ್ಯ ಉಳಿದಿಲ್ಲ. ಆದರೆ ಒಂದು ನಿಜ, ಅವಳು ನಿನ್ನೆ ಯಾವಾಗಿನಕಿಂತ ಚಂದ ಅನಿಸಿದಳು. ಅದೇ ಕೋಪವಿಲ್ಲದ ಮುಖ, ಕೊಂಕಿಲ್ಲದ ನುಡಿ. ಕಠೋರತೆ ಹತ್ತಿರವೂ ಇಲ್ಲ. ನನ್ನಲ್ಲಿ ಪ್ರೀತಿಯ ಮಾತು ಹೇಗೆ ಹೇಳಿದ್ದಳೊ ದೂರವಾಗುವ ನಿರ್ಧಾರವನ್ನು ಕೂಡ ಹಾಗೆ ಹೇಳಿದಳು. ಯಾಕೆ ಹೀಗೆ ಅಂತಾ ಕೇಳುವ ಮನಸಾದರೂ ಹೇಗೆ ಬಂದೀತು. ಸುಮ್ಮನೆ ಕೇಳುತ್ತ ಕುಳಿತೆ, ಅವಳು ಮುಗೀತು ಅಂತ ಎದ್ದು ಹೋದಾಗ ಪ್ರತಿ ಭೇಟಿಯ ಧನ್ಯತೆಯೊಂದಿಗೆ ನಾನು ಎದ್ದು ಬಂದೆ. ಅವಳ ಮೇಲಿನ ಪ್ರೀತಿ ಕಡಿಮೆಯಾಗಿದೆ ಅನ್ನಿಸಲಿಲ್ಲ. ದೂರುವ ಮಾತು ಕೂಡ ಬರಲಿಲ್ಲ.

ಇವತ್ತು ಕೂಡ ಅಲ್ಲಿಗೆ ಹೋಗಬೇಕು. ತಿರುಗಿ ಬರದ ಅವಳ ದಾರಿ ಕಾಯ್ದು ದುಃಖಿಸಬೇಕು. ಪ್ರೀತಿ ಕಣ್ಣೀರಾಗಿ ಹರಿಯಬೇಕು. ಇದು ಕನಸು ಅಂತ ಕಿವಿ ಚಿಗುಟಿ ತಿಳಿಯಬೇಕು. ಪ್ರತಿ ಸಂಜೆಯ ನೆನಪುಗಳಿಗೊಂದು ತಣ್ಣನೆಯ ವಿದಾಯ ಹೇಳಬೇಕು. ನಾಳೆ ಅದೇ ಪಾರ್ಕಿನ ಬೆಂಚಿನಲ್ಲಿ ಅವಳ ಜೊತೆ ಅಪರಿಚಿತ ಅನಿಸಬೇಕು. ಕಾರಣಕ್ಕೊಂದು ಸ್ನೇಹ, ಬಯಕೆಗೊಂದು ಪ್ರೀತಿಯನ್ನು ಮರೆತು ಮತ್ತೆ ಅವಳ ಕಂಡರೆ ಸೋಲದಿರಬೇಕು. ಇದೆಲ್ಲ ಸಾಧ್ಯವಾ? ಮನಸಿನ ಕಿಡಿ ಸುಡದೆ ಇರುತ್ತದೆಯೆ? ಗೊತ್ತಿಲ್ಲ.

ನಾಳೆ ಹೇಗಿರಬಹುದು? ಇಂದಿನಂತೆಯೆ....ಇಲ್ಲಾ ನಿನ್ನೆಯಂತೆಯೆ?... ಅಥವಾ ಮತ್ತೆ ಹೊಸ ಕನಸುಗಳನ್ನು ಹೊತ್ತು ಹೊಸ ಹಾದಿ ತುಳಿಯಲೆ? ಒಂಟಿತನ ಕಾಡಿದ್ದೇ ಈಗ. ಏನು ಮಾಡಲಿ ಅಂತ. ಪ್ರೀತಿ-ಸ್ನೇಹಕ್ಕಿಂತ ಹತ್ತಿರದ ಸಾಂಗತ್ಯ ಬೇಕಿದೆ. ನನ್ನೊಳಗೆ ನನ್ನೇ ಕಾಣಬೇಕಿದೆ. ಗೂಡಾಗಿದ್ದು ಸಾಕು ರೆಕ್ಕೆಯಾಗಬೇಕಿದೆ.

ಸುತ್ತ ನಿನ್ನಯ ಒಲವು
ಪ್ರೀತಿ ಬೆಳಕೆಲ್ಲ
ಬಲು ದೂರ ಹೊರಟಿಹೆನು
ಕತ್ತಲಿನ ಬೆನ್ನಟ್ಟಿ