Friday, July 28, 2006

ಮನಸು ಮಲೆನಾಡಾದ ರೀತಿ!!

ಅದೊಂದು ಪರ್ವತದ ಸಾಲು..ಒಂದಷ್ಟು ಗಿಡ-ಮರ..ಮತ್ತೇನಿದೆ??.....ಅಸಲಿಗೆ ಮಲೆನಾಡು ಅಂದ್ರೆ ಯಾಕೆ ಮನಸು ಹುಚ್ಚೇಳುತ್ತದೆ. ನೆನಪಿಸುತ್ತ ಹೋದ ಹಾಗೆ ಮತ್ತೇ ಅದೇ ಸವಿಯ ಭಾವ.

ಹೀಗೆ ಇಂದು ಸಂಜೆ....ಮನೆಯಿಂದ ಹೊರಟು ಬೆಟ್ಟದ ಝರಿಯಗುಂಟ ಹರಿದ ಕಾಲುದಾರಿ ಸೇರಿದಾಗ ಇನ್ನೂ ಸೂರ್ಯ ಬಿಸಿಯಾಗಿದ್ದ. ಮಧ್ಯಾಹ್ನದ ನಿದ್ದೆ ಮಂಪರಿನಲ್ಲಿ ಕನವರಿಕೆಯ ಮಗ್ಗುಲ ಕಳೆದಾಗ ಅಮ್ಮ ಬಂದು ಎಬ್ಬಿಸಿ ಚಹ ಕೊಟ್ಟಾಗ ನಿನ್ನ ನಗುವೊಂದು ಸುಳಿದ ಹಾಗಾಯಿತು.

ಎಷ್ಟು ದಿನ ಆಯ್ತು ನಿನ್ನ ನೋಡಿ? ............ಈ ಸೋಮವಾರಕ್ಕೆ ಪೂರ್ತಿ ಹದಿನಾಲ್ಕ-ಏಳಲೆ ತೊಂಭತ್ತೇಂಟು ದಿನ...(ಲೆಕ್ಕದಲ್ಲಿ ಯಾವಾಗ್ಲೂ ಮುಂದು...ಅಪ್ಪ ಕಲಿಸಿದ್ದಲ್ಲವಾ!!..). ಇನ್ನೆರಡಕ್ಕೆ ಶತಕ ಅಂತ ಖುಶಿ ಪಡಬೇಕೊ ನಿಟ್ಟುಸಿರಾಗಬೇಕೊ ...ಇನ್ನೂ ಗೊಂದಲ. ಈಗೆಲ್ಲ ದಿನಚರಿ ಒಂದೇ..ಬೆಳಿಗ್ಗೆ ಅಪ್ಪನ ಜೊತೆ ತೋಟಕ್ಕೆ ಹೊರಟರೆ...ರಸ್ತೆಯೆಲ್ಲ ನಿನ್ನ ನೆನೆಪಿನ ಸವಾರಿ. ಅಮ್ಮನ ಜೊತೆ ಊಟಕ್ಕೆ ಕುಳಿತರೆ ಮೊಸರನ್ನದ ಹೊತ್ತಿದೆ ಸರಿಯಾಗಿ ನಿನದೊಂದು ತರಲೆ. ಸುಮ್ಮನೆ ನಕ್ಕರೆ ಅಮ್ಮ ಕೇಳಿಯಾಳೆಂಬ ಬಿಗುಮಾನ. ಸಂಜೆ ಮಾತ್ರ ನಿನ್ನ ಜೊತೆನೆ..

ಅರೇ ಆಗಲೆ ಅರ್ಧ ದಾರಿ ಬಂದಾಯ್ತಲ್ಲ. ನೋಡಿದ್ಯಾ! ನೀನಿದ್ರೆ ಈ ಗುಡ್ಡದ ಎತ್ತರ ಕೂಡ ಮರೀತಾ ಇದೆ. ಆಗ್ಲೆ ಊರಿನ ಮನೆಗಳೆಲ್ಲ ಬಂಗಾರಕ್ಕೆ ತಿರುಗ್ತಾ ಇವೆ. ಇನ್ನೇನು ಕೆಂಪಾದವು ಅನ್ನೋ ಹೊತ್ತಿಗೆ ಈ ಬೆಟ್ಟ ಪೂರ್ತಿ ಹತ್ತಿದ ಹಾಗಾಯ್ತು. ಆಯಾಸವೇನಿಲ್ಲ. ಈ ತಂಪು ಗಾಳಿ ಬಹಳ ಇಷ್ಟ. ಇದೇ ಹಾದಿಯಲ್ಲೆ ಶಾಲೆಗೆ ಹೋಗ್ತಿದ್ದದ್ದು. ಆಗೆಲ್ಲ ಇಲ್ಲೇ ಕೂತು ಎನೇನೊ ಹರಟೆ ಹೊಡೆದು ಹೋಗ್ತಿದ್ವಿ. ಮಾತಾಡಿದ್ದೆಲ್ಲ ನೆನೆದ್ರೆ ಆ ನಿರಭ್ರ ಆಕಾಶದ್ದೇ ಜಾಸ್ತಿ ಪಾಲು. ಅಲ್ಲಿರೋ ನಕ್ಷತ್ರ...ಅವಕ್ಕಿರೋ ಹೆಸರು....ನನಗೆ ಅನಿಸತ್ತೆ ಅವಾಗಿಂದಲೇ ನನಗೆ ಈ 'ಒರಿಯನ್' ಮೇಲೆ ಎನೋ ಅಕ್ಕರೆ. ಈಗ್ಲೂ ಒಮ್ಮೊಮ್ಮೆ ಕಣ್ಣಿಗೆ ಬಿದ್ದರೆ ಮನಸು ಬಹಳ ಹಗುರ....'ನಾನಿಲ್ಲೇ ಇರೋದು' ಅಂತ ಒಂದು ಭರವಸೆಯ ಪಿಸುಮಾತು. ಇವತ್ತು ರಾತ್ರಿ ತನಕ ಇಲ್ಲೇ ಇರಬೇಕು...ಈ ಬೆಟ್ಟದ ಮೇಲೆ ...ನಿನ್ನ ನೆನಪುಗಳ ಹತ್ತಿರ.

ಆಗ್ಲೆ ಊರಲ್ಲೆಲ್ಲ ದೀಪ ಹಚ್ಚತಾ ಇದಾರೆ. ರಸ್ತೆ ದೀಪ ಬೆಳಗಿರೋದು ನೋಡಿದ್ರೆ ಊರು ತುಂಬ ಚುಕ್ಕೆ ಸುರಿದ ಹಾಗಿದೆ. ಜನರ ಗಜಿಬಿಜಿ ಕಡಿಮೆಯಾಗಿ ಝರಿಯ ಹರಿವು ಕೇಳಿಸ್ತಾ ಇದೆ. ಕೀಟಗಳ 'ಜುಯ್ಂ', 'ಕಿಟಿರ್'..ಕಪ್ಪೆಗಳ 'ಕೊರ್ ಕೊರ್' ಮತ್ತೇನೊ ಶಬ್ದಗಳು. ಆದ್ರೆ ಎಲ್ಲವು ಒಂದು ಲಯದಲ್ಲಿ.

ಸೂರ್ಯ ಈಗ ಮುಳುಗಿದ ಅನ್ನೋವಷ್ಟರಲ್ಲೇ ಮುಸ್ಸಂಜೆ ಮುಗಿದು ಕತ್ತಲಾಯಿತು. ಮತ್ತೆ ಮನಸು ನಿನ್ನ ನೆನಪುಗಳ ಹೆಗಲೇರಿತು. ಇವತ್ತು ಕೂಡ ನಿನ್ನ ಅಂಗೈ ನುಣುಪು ಕೈ ಸವರುತ್ತಾ ಇದೆ. ಮಾತು ಆಗಲೂ ಇಲ್ಲ ...ಇಗಲೂ ಇಲ್ಲ. ಮನಸು ಮಾತ್ರ ಯಾವಾಗಲೂ ಆರ್ದ್ರ.

ಅಮ್ಮ ಕಾಯ್ತಾ ಇರ್ತಾಳೆ. ಅವಳಿಗೂ ಗೊತ್ತು ನಾನು ಬೇರೆ ಎಲ್ಲೂ ಹೋಗೊಲ್ಲ. ಈ ಬೆಟ್ಟ ...ಬಿಟ್ಟರೆ ಆ ತೋಟ...ಅದೂ ಇಲ್ಲಾ ಅಂದ್ರೆ ಮನೆಯ ಅಟ್ಟ...ಒಂದು ಪುಸ್ತಕ....ಮತ್ತೆ ನಿನ್ನ ನೆನಪುಗಳು.

0 Comments:

Post a Comment

<< Home