Monday, February 06, 2023

ಒಂದು ಹಿಡಿ ಕ್ಷಣಗಳು. . .ಅಷ್ಟೇ!!!

ಮಳೆ ಅವತ್ತೇ ಬರಬೇಕಿತ್ತು. ಬೆನ್ನಹುರಿಯಲ್ಲಿ ಸಣ್ಣ ನಡುಕ ಹುಟ್ಟುವ ಮುನ್ನ. ಮುಂದಿಂದೆಲ್ಲಾ ಮಸುಕು, ಮಂಜು. ಬೆವರಿನ ಕಿಚ್ಚಿನಲ್ಲು ನಡುಕ ಇರಬಹುದು ಎಂದು ತಿಳಿದಿದ್ದೆ ಆಗ. ಅಷ್ಟಾಗಿ ಅಲ್ಲಿ ನಡೆದದ್ದು ಏನೂ ಇಲ್ಲ. ಬರೀ ಕೈ ಬೆಸೆದುಕೊಂಡಿದ್ದವು ಅಷ್ಟೇ. ಅದೂ ಎಷ್ಟೋ ದಿನಗಳ ನಂತರ ಸಿಕ್ಕ ಸಂಭ್ರಮಕ್ಕೆ. 

ಸುಮ್ಮನೆ ಒಂದು ಸಂಜೆ ಅಂತ ಅಂದುಕೊಳ್ಳೋ ಹಾಗಿರಲಿಲ್ಲ. ಟ್ರೇನಿಂದ ಇಳಿಸಿ ಬೈಕು ಹತ್ತಿಸಿಗೊಂಡು ಬಂದಾಗಿಂದ ಒಂದೇ ಯೋಚನೆ. ಇದು ನನ್ನ ಊರು, ನಾ ನೋಡಿ ಮೆಚ್ಚಿದ ಹಾದಿಗಳು, ಯಾವುದೋ ದಿನ ಕೈಹಿಡಿದು ಕೂಡಿಸುವ ತಿರುವುಗಳು, ಖುಷಿಯಿಂದ ಕಳೆದ ಮರಳಿನ ಹಾಸುಗಳು, ಹುಡುಕದೆ ಸಿಕ್ಕ ಕಲ್ಲಿನ ಗುಡಿಗಳು, ಸುಮ್ಮನೆ ಕೂತಿದ್ರು ಜೊತೆಗೊಡುವ ಮೈಲಿಗಲ್ಲುಗಳು - ಯಾವುದನ್ನ ನಿನಗೆ ಮೊದಲು ತೋರಿಸಬೇಕು?

ಒಂದಂತೂ ಖಾತ್ರಿ, ಇವತ್ತಿನ ದಿನ ನನ್ನ ಮನದ ಗೋಡೆಯಲ್ಲಿ ಮಸುಕಾಗೋದೇ ಇಲ್ಲ, ಇಡೀ ಜೀವನಪೂರ್ತಿ. ಇಪ್ಪತ್ತು ವರ್ಷಾಗಳಾದರು ಇನ್ನೂ ನಿನ್ನೆ ಆದಷ್ಟು ನಿಖರ. ಅದೇ ಖುಷಿ. ಅದೇ ಆತಂಕ. 

ಇದು ಪ್ರೀತಿ ಅಂತ ಹೇಳಿದ್ರೆ .... ಗೊತ್ತಿಲ್ಲ, ಈಗಲೂ ಸಹ.

ಹೆಗಲು ಮುಟ್ಟಿ ಕೇಳಿದ್ದು ನೆನಪಿದೆಯಾ? ಹೇಗಿದ್ದೀಯ, ಆರಾಮನ? ನನಗೆ ಅವತ್ತು ಆದಷ್ಟು ಖುಷಿ ಮುಂದಿನ ಎರಡು ವರ್ಷ ನನ್ನ ಅಲ್ಲೇ ಉಳಿಸಿಕೊಂಡಿತ್ತು ಆ ಊರು. 

ನಿನ್ನ ಮಾತು ಕೇಳ್ತಾ, ಊರೆಲ್ಲ ಸುತ್ತಿದ್ದು ಈಗಲೂ ಮರೆತಿಲ್ಲ. ಒಂದು ದಿನದಲ್ಲಿ ಇಡೀ ಊರನ್ನ ನಾಳೆ ಇಲ್ಲ ಅನ್ನೋ ಹಾಗೆ ತಿರುಗಿದ್ವಿ. ದಿನದ ಕೊನೆಗೆ ಉಳಿಸಿಕೊಂಡ ಆ ಬೀಚಿನ ಮರಳು ಎಷ್ಟೋ ದಿನ ಜೇಬಲ್ಲಿ ಇತ್ತು. ಆ ರಾತ್ರಿ ನಾ ಮಲಗಲೇ ಇಲ್ಲ. ಬೆಳಿಗ್ಗೆ ಕಳಿಸಿಕೊಡಬೇಕಲ್ಲ!

ಸಂಜೆ ಕುಳಿತಾಗ ಬೆನ್ನು ತಟ್ಟುತ್ತ ಕೇಳಿದ್ದೆ, ಹೇಗಿದೆ ನನ್ನೂರು. ನಿನ್ನ ನಗು, ನಿನ್ನ ಕಣ್ಣಲ್ಲಿನ ಆತಂಕ ಮುಚ್ಚಲಿಲ್ಲ. ನಿನಗೂ ಗೊತ್ತು ನಾಳೆ ಮತ್ತೆ ನಿನ್ನ ಊರಿಗೆ ಹೋರಡಬೇಕು, ಕೈಚೆಲ್ಲಿ ಬೆನ್ನು ತೋರಿಸಬೇಕು ಅಂತ. ಇವತ್ತಿನ ಈಗಿನ ಕ್ಷಣ ಯಾವಾಗಲೂ ಹೀಗೆ, ನಮ್ಮದಾಗೆ ಉಳಿತದೆ ಅಂತ ಮಾತ್ರ ಗೊತ್ತಿತ್ತು. 

ಇದನ್ನ ಯಾವಾಗಲೂ ಹೀಗೆ ಇಟ್ಟುಗೊಂಡಿರ್ತೇನೆ ....  ಯಾವಾಗಲೂ...!



Thursday, May 10, 2012

ದೂರವಿರು....!!

ಸುಮ್ಮನೆ ಒಂದು ಸಿಟ್ಟು, ಎಂಥದೋ ಅಸಹನೆ. ನೀನು ಇದ್ದೀಯ ಅಂತ ಅದೆಲ್ಲ ಹೇಗೋ
ಮರೆತು ಹೋಗಿತ್ತು. ನೀನಿಲ್ಲದೆ ಹೋದ್ರೆ ಹೇಗೆ ಅಂತ ಯೋಚಿಸುವ ಮನಸ್ಥಿತಿ ಕೂಡ ಇಲ್ಲ.
ಖಾಲಿ ಅನಿಸಬಹುದು ಏನೋ. ಸಂಜೆ ನೀನು ಇರಲ್ಲ. ಏನೇನು ಮಾಡಬಹುದು?. ಸುಮ್ಮನೆ
ಮಲಗಿ ಬಿಡೋದ ಅಂತ...ಅದ್ದರೆ ಅದು ಅಷ್ಟು ಸಲೀಸಲ್ಲ. ಸುಮ್ಮನೆ ಇದ್ದಷ್ಟೂ ನಿನ್ನ ಬಗ್ಗೆನೇ
ವಿಚಾರಗಳು. ಅವಕ್ಕೆ ಉತ್ತರ ಕೊಡೊ ಅಷ್ಟರಲ್ಲೇ ಮನಸು ರೊಚ್ಚಿಗೆದ್ದು ಹೋಗಿರ್ತದೆ.
ಏನೂ ಯೋಚಿಸದೆ ಇರೋದು ಹೇಗೆ?. ಏನಾದರೂ ಮಾಡಬೇಕಲ್ಲ. ಒಂದು ಉಸಿರಿಗೂ
ವ್ಯವಧಾನ ಇರಬಾರದು.

ವಾರದಿಂದ ಮಳೆಯಾಗಿ ಊರೆಲ್ಲಾ ತಣ್ಣಗೆ ಇದೆ. ಇವತ್ತು ಸಂಜೆನೂ ಮಳೆ ಬರಬಹುದು.
ಇವತ್ತೆಲ್ಲ ಬಿಸಿಲು ಬಿದ್ದು ಸೆಖೆ ಇದ್ರೆ ಸರಿಯಾಗ್ತಿತ್ತೋ ಏನೋ. ಹಸಿರು, ಒದ್ದೆ ನೋಡಿದಷ್ಟು
ಅಸಹನೆ ಜಾಸ್ತೀನೆ. ಈಗೀಗ ತಣ್ಣಗೆ ಇರೋ ಭಾವನೆನೆ ರೇಜಿಗೆ ತರ್ತಾ ಇದೆ. ಹಸಿರೆಲ್ಲ ತಣ್ಣಗೆ, 
ತಣ್ಣಗಿರೋದೆಲ್ಲ ಒದ್ದೆ ಅನ್ನೋ ಹಾಗೆ. 

ಮುಂಚೆ ನಾಳೆ ಅನ್ನೋದು ಒಂದು ಬರೀ ಕನಸು. ಈಗ ಅದಕ್ಕೂ ಮೀರಿದ ಉದಾಸೀನತೆ.
ನಾಳೆ ಬಂದೆ ಬರತ್ತೆ ಅಂತ. ಬದಲಾವಣೆ ಮೇಲೆ ಒಂದು ಸಣ್ಣಗೆ ಹಿಂಜರಿಕೆ, ಮುನಿಸು.
ಸುಮ್ಮನೆ ಎದ್ದು ಹೋಗಿ ಬಿಡಬೇಕು ಅನಿಸಿದರೂ ಮುರಿಯಲಾರದ ಬಂಧಗಳು. ದಿನ
ಕಳೆದಷ್ಟು ಬಿಗಿಯುತ್ತಲೇ ಇವೆ. ಬೇಕು ಎಂದು ಬಯಸಿ, ಹಠ ಹಿಡಿದು ಜಯಸಿದ್ದಕ್ಕೆ
ನಿರಾಳತೆಯ ಜೊತೆಗೆ ಇಷ್ಟು ಸಾಕು ಅನ್ನುವ ನಿರ್ಲಿಪ್ತತೆ. 

ದಿನವೂ ಬೆಳಕಿನೆಡೆಗೆ ಹೋಗಬೇಕು ಅನ್ನುವ ಹಂಬಲದಲ್ಲಿ ಕತ್ತಲೆಯ ಮಮತೆ ಮರೆತೇ
ಹೊಯ್ತೇನೋ? ಸುಮ್ಮನೆ ಕುಳಿತು ಎದೆ ಬಡಿತ ಕೇಳುವ ಸಹನೆ ಎಲ್ಲಿ ಹೋಯ್ತು? ಜೀವನ
ಬರೀ ಓಡುವುದೇ ಆದರೆ ನಿಲ್ಲುವುದು ಕಲಿಯಲೇ ಬಾರದಿತ್ತೇನೋ? 

ನಿನ್ನೆಯದು ಈಗಲೂ ಕನಸಿನ ಹಾಗಿದೆ.  ಅಷ್ಟು ಹೊತ್ತು ಮನಸು ಖಾಲಿ ಇರೋದೇ ಇಲ್ಲ.
ನಿನ್ನ ತಲೆ ಸವರಿ ಬಸ್ಸಿನಿಂದ ಇಳಿದಾಗಲೇ ಕಾಡಲಿಕ್ಕೆಸುರುವಾದದ್ದು, ನಾಳೆ ಅನ್ನೋದು
ಹೇಗಿರಬಹುದು? ಅಷ್ಟೆಲ್ಲ ಹೊತ್ತು ಏನು ಮಾಡಬೇಕು? - ನೂರಾರು ಪ್ರಶ್ನೆಗಳು.

ನಿನ್ನಿಂದ ದೂರ ಇರುವುದನ್ನು ಕಲಿಯಬೇಕಿತ್ತೋ ಏನೋ......

ಹೋಗಿ ಬಾ ಓ ಒಲವೇ! 
ಈ ದೂರ ಬೇಕಾಗಿದೆ 
ನಾಳೆ ನಿನ್ನ ನೆನಪಿಗೆ 
ಇಂದೇ ಕನವರಿಸುತಿಹೆ 

ನಮ್ಮ ಜೊತೆ ನಾನಿದ್ದು 
ನನ್ನೇ ಮರೆತಾಗಿದೆ
ಅನಿಸುತಿದೆ ಇಂದು
ನಾನೇ ನಾನಾಗಿಹೆ 

ಇನ್ನೂ ಬರದ ನಾಳೆಗೂ 
ಬೇಕೇ ಈ ಅಸಹನೆ 
ಹೇಗೋ ಕಳೆದೆನಿಂದು 
ಕ್ಷಣಗಳನೆಣಿಸುತ್ತಲೇ

ಮರಳಿ ಬಾ ಓ ಒಲವೆ!!
ಕನಸು ಹುಟ್ಟುತ್ತಲಿದೆ 
ತುಂಬಿದ ಕಣ್ಣೆವೆಗಳಿಗೆ 
ಬೊಗಸೆಯಾಗಬೇಕಿದೆ....  




Friday, July 30, 2010

ಮುಂದೇನು?!!...

ಈ ದುಗುಡ ಇದ್ದದ್ದು ಯಾವತ್ತು ನಿಜ. ಮುಂದೆ ಏನು? . ರಾತ್ರಿ ಮೂರರ ನಿಷ್ಯಬ್ದದಲ್ಲೂ ಮೈಯೆಲ್ಲಾ ಬೆವರಿ ಎದೆಯಲ್ಲಿ ಸಣ್ಣ ನಡುಕ ಬಂದಾಗಲೇ ಅನಿಸಿತ್ತು, ಇನ್ನೂ ನಿದ್ದೆ ಬಾರದು, ಇಷ್ಟು ಹೊತ್ತು ಮಲಗಿದ್ದೆ ಜಾಸ್ತಿ, ಸಂಜೆಯ ಪ್ರತಿ ಘಳಿಗೆಗಳು ಒ೦ದರಮೇಲೊ೦ದು ಹಾಯ್ದು ಹೋದವು.

ನೀನೆಷ್ಟು ಹತ್ತಿರ ಅ೦ದುಕೊಳ್ಳೋದ್ರಲ್ಲೇ, ಏನಾಗಿದೆ ನನಗೆ ಅನ್ನೋ ಪ್ರಶ್ನೆ. ನಿನಗೆ ಹೇಗೆ ಹೇಳುವುದೋ ಗೊತ್ತಿಲ್ಲ. ಕಳೆದ ವಾರ ನಿನ್ನ ಭೇಟಿಯಾಗದೆ ಸುಮ್ಮನೆ ರೈಲು ಹತ್ತಿದಾಗ್, ಮನಸು ತಡೀಲಾರ್ದೆ ಎಸ್ ಎಂ ಎಸ್ ಕಳಿಸಿದ್ದೆ - ಗಣೇಶ್ ಬಂದ, ಹೋದ,
ದರ್ಶನ ಸಿಗಲಿಲ್ಲ! ಅಂತ, ಡಬ್ಬಿಯಲ್ಲಿದ್ದ ಅಮ್ಮನ ಮೋದಕ ಅಲುಗಾಡಿದ್ದು ಸುಳ್ಳಲ್ಲ.

ದಿನದ ಕೆಲಸದ ನಡುವೆ ಕೂಡ ನೀನು ಈಗೇನು ಮಾಡ್ತಿರಬಹುದು ಅಂತಾನೆ ಯೋಚನೆ. ನಿನ್ನ ಬಗ್ಗೆ ನಾನು ಯೋಚಿಸ್ತಾ ಇದ್ದೀನಿ, ಅದು ನಿನಗೆ ಗೊತ್ತಿಲ್ಲ ಅನ್ನೋ ಸಣ್ಣ ಬೇಸರ. ರಾತ್ರಿ ಊಟದ ನೆಪ ಮುಗಿದರೆ, ಬಾಲ್ಕನಿಯ ತುಂಬಾ ನಿನ್ನದೇ ಚಡಪಡಿಕೆ, ಈಗ ಯಾಕೆ ಹೇಳಬಾರದು ಅಂತ. ಹೇಳಬೇಕು ಅಂದ್ರುನೂ ಏನು ಅಂತಾ ಹೇಳೋದು.

ನಿನಗಿರೋದೆ ಎರಡು ದಾರಿ, ಒಂದು ನಾಚುತ್ತ 'ನಂಗು' ಅಂತೀಯ, ಇಲ್ಲಾ ನನ್ಗೋತ್ತಿಲ್ಲಪ್ಪಅಂತ ಕಣ್ಣಲ್ಲಿ ನೀರು ತರ್ತೀಯ. ಎರಡರಲ್ಲಿ ಒಂದು ನಿಜ. ಇವನ್ನು ಬಿಟ್ಟು ಬೇರೆ ಉತ್ತರ ನಿನ್ನಿಂದ ಬರೋಲ್ಲ ಅಂತ ಗೊತ್ತಿದ್ರು, ಆ ಮೂರನೆಯ ಉತ್ತರಕ್ಕೆ ಅದೆಷ್ಟು ಹೆದರಿದ್ದೆ ಅಂದ್ರೆ ತೂಕ ಕಡಿಮೆ ಆಗಿದ್ದು ಗೊತ್ತಾಗಿದ್ದೆ, ಚಪ್ಪಲಿ ಭಾರ ಅನಿಸಿದಾಗ. ಇವತ್ತು ಬೇಡ ನಾಳೆ, ನಾಳೆ ಸಂಜೆ, ಇಲ್ಲಾ ರಾತ್ರಿ ಅಂತ ಪ್ರತಿ ಘಳಿಗೆಯಲ್ಲಿ ನಿನ್ನ ಉತ್ತರವನ್ನ ಮನಸಿನಲ್ಲೇ ಮುಂದೆ ಹಾಕ್ತಾ ಇದ್ದೆ. ಕಡೆಗೆ ನನ್ನಲ್ಲೇ ಇದು ಹುದುಗಿ ಹೋಗ್ಲಿ ಅನ್ನೋವಷ್ಟು ನಿರಾಶೆ. ನಿನಗೆ ತಿಳಿಸೋ ರೀತಿ ಹೇಗಿರಬೇಕು ಅನ್ನೋದೇ ದೊಡ್ಡ ಪ್ರಶ್ನೆ. ಹೇಗೆ ಹೇಳಿದ್ರೆ ನಿನಗೆ ಖುಷಿ ಆಗ್ತದೆ, ಯಾವಾಗ ಹೇಳಿದ್ರೆ ನಿನ್ನ ಉತ್ತರ ನಂಗೆ ಬೇಸರ ತರಿಸಲ್ಲ ಅಂತ ತಲೆ ಕೆರೆದುಕೊಂಡಿದ್ದೆ.

ಇಷ್ಟಾಗಿ ಪ್ರೀತಿ ಹೇಳುವ ಘಳಿಗೆ ಅನ್ನೋದು ಕೇಳ್ಕೊಂಡು ಬರ್ಲಿಲ್ಲ, ಸುಮ್ಮನೆ ಕುಳಿತ ಬಂಡೆಯ ಜೊತೆ ಕೆಲವು ಎ೦ದಿನ ಮಾತುಗಳೇ ಸಾಕಿದ್ದವು. ಹೆಗಲ ಆಸರೆಯೇ ನೂರಾರು ಹೇಳದ ಮಾತುಗಳ ಪಿಸುಗುತ್ತಿತ್ತು. ಈಗಲೂ ನೆನಪುಗಳ ತಡಕಾಡಿ, ಕಳೆದ ಪ್ರತಿ ಕ್ಷಣಗಳನ್ನ ಹರವಿದ್ರೆ, ಹೇಳಿದ್ದು ನೀನಾ ಇಲ್ಲಾ ನಾನಾ ಅನ್ನೋದು ಗೊತ್ತೇ ಆಗಲ್ಲ. ಆ ಬ೦ಡೆ ಹತ್ತ ಬೇಕಾದ್ರೆನೆ ಪ್ರೀತಿಯ ಎತ್ತರ ಮುಟ್ಟಿದ್ವಾ? ಗೊತ್ತಿಲ್ಲ. ಸಂಗೀತ ಕೇಳಲಿಲ್ಲ, ಮೇಘಗಳು ಗರ್ಜಿಸಲಿಲ್ಲ, ಇದ್ದಿದ್ದು ತಿಳಿ ಗಾಳಿ ಮತ್ತೆ ಯಾವಾಗಲೋ
ಕೇಳಿಸುವ ನಂದಿಯ ಗಂಟೆ. ಮಾತಿನ ಮಧ್ಯದ ನಿಷ್ಯಬ್ದಗಳಿಗೆ ಇಷ್ಟೊಂದು ಸವಿ ಇರ್ತದೆ ಅಂತ ತಿಳಿದಿದ್ದೆ ಆಗ.

ದಾರಿಯಲ್ಲಿ ನಡೆಯುವಾಗ ನಿನ್ನ ಅಂಗೈ ಸೋಕಿ ನಾಳೆ ಹೇಗೇ ಇರಲಿ ನೀನಿರ್ತೀಯ ಅನ್ನೋ ಭರವಸೆ. ಮುಂದೆ ಏನು ಅನ್ನೋ ಪ್ರಶ್ನೆ ಕೆಲವು ಘಳಿಗೆ ಮರೆಯಾಗಿತ್ತು.

ಮಳೆಹನಿಯ ತುಂತುರು
ನಿಲ್ಲದಿರಲಿ ಈ ರಾತ್ರಿ
ಮನಸು ಜೊತೆಯಾಯ್ತು
ಮುಗಿಯದಿರಲಿ ಈ ದಾರಿ

Sunday, November 29, 2009

ಅರೆ ಘಳಿಗೆ ಬೇಕು...!

ಮೊದಲೆಲ್ಲ ಅನಿಸ್ತಿತ್ತು, ಮಾತೆಲ್ಲ ಮುಗಿದ ಮೇಲೆ ಉಳಿಯೋದು ಪ್ರೀತಿ ಅಂತ. ಆದ್ರೆ ಅದು ಮೌನ ಕೂಡ ಅಂತ ಈಗ ಮನವರಿಕೆ ಆಗಿದೆ. ಎಷ್ಟು ಗಾಢವಾದ ನಿಶ್ಯಬ್ದ ಅಂದ್ರೆ ನನ್ನ ಉಸಿರೇ ನನಗೆ ಕೇಳಿಸುವಷ್ಟು. ಎದೆ ಬಡಿತಗಳನ್ನು ಎಣಿಸಬಹುದು. ಕಣ್ಣು ಮುಚ್ಚಿ ಯೋಚನೆಗಳಿಗೆ ತಲೆ ಕೋಡೋಣ ಅಂದ್ರೆ ಅದೂ ಖಾಲಿ.


’ಟೈಮ್ ಎಷ್ಟಾಯ್ತು’ ಅಂತ ಪದೇ ಪದೇ ನಿನಗೆ ಕೇಳಿದ್ದೇ ಬಂತು. ಬೇರೆ ಮಾತುಗಳಿಗೆ ಹರಿವೇ ಇಲ್ಲ. ಎನೇ ಹೇಳ್ಬೇಕಂದ್ರೂ ಅದು ನಿನಗೆ ಗೊತ್ತೇ ಇದೆಯಲ್ಲ. ಎಲ್ಲ ಕ್ಷಣಗಳನ್ನ ನಿನ್ನ ಜೊತೆಯಲ್ಲೇ ಕಳೆದಿದ್ದಲ್ಲವೆ? ಈ ನಿಶ್ಯಬ್ದಗಳು ತಾಕಿದಾಗ ಮುಂದೇನು ಎಂಬ ಪ್ರಶ್ನೆ. ಮನಸು ಎಷ್ಟು ತುಂಬಿಕೊಂಡಿದೆ ಅಂದ್ರೆ ಅಲ್ಲಿ ಬೇರೆ ಜಾಗವೇ ಇಲ್ವೇನೊ ಅನಿಸ್ಬೇಕು.


ದಿನ-ರಾತ್ರಿಗಳು ಎಷ್ಟು ನಿರಾಯಾಸವಾಗಿ ಹೋಗ್ತಾ ಇವೆ ಅಂದ್ರೆ ಅಶ್ಚರ್ಯಕ್ಕಿಂತ ಅನುಮಾನವೇ ಜಾಸ್ತಿ. ಇಷ್ಟು ಸಲೀಸು ಅಂತ ಯಾವತ್ತೂ ಅನ್ಕೊಂಡಿರ್ಲಿಲ್ಲ. ಜೀವನ ಅಂದ್ರೆ ಹೋರಾಟ, ಹುಡುಕಾಟ, ದುಃಖ, ಆಯಾಸ ಅಂತೆಲ್ಲ ಅನ್ಕೊಂಡಿದ್ದೆ. ಅದು ಯಾವ್ದೂ ಇಲ್ಲದೇ ಹರಿವ ಜೋರು ನದಿಯಲ್ಲಿ ತೇಲ್ಕೊಂಡು ಹೋದಂಗಿದೆ, ನಿಂತು ಚಿಂತಿಸುವಷ್ಟು ವ್ಯವಧಾನವಿಲ್ಲದೆ!


ಕಳೆದ ಕೆಲವು ವರ್ಷಗಳು ನನ್ನವೇ ಅನ್ನೋವಷ್ಟು ಅಪರಚಿತ. ಬಾಳಿನ ಗುರಿ ಎಷ್ಟು ನಿಖರ ಅಂದ್ರೆ ದಾರಿ ಹುಡ್ಕೊ ಕಾರಣವೇ ಇಲ್ಲ. ಇಟ್ಟ ಪ್ರತಿ ಹೆಜ್ಜೆ ಒಂದೆ ದಿಕ್ಕಿಗೆ. ಮಂಜಿನಲ್ಲಿ ಹೊರಟ ಮೆರವಣಿಗೆ ಬಯಲಿನಲ್ಲಿ ಬಿಸಿಲು ಕಂಡ ಹಾಗೆ. ಮನಸಿನ ತಿಕ್ಕಾಟ, ವಿತಂಡವಾದ, ನಿರ್ಧಾರದ ಜವಾಬ್ದಾರಿ ಕಡೆಗೆ ಬೇಸರಿಕೆಯ ಮುನಿಸಿಗೆ ಕೂಡ ಅರೆ ಕ್ಷಣ ಸಿಗುತ್ತಿಲ್ಲ. ಒಂದೋ ಮನಸೆಲ್ಲ ಬರಿದಾಗಿದೆ, ಇಲ್ಲಾ ಬೇರೆ ಏನೂ ಹಿಡಿಸಲಾರದಷ್ಟು ಅದು ತುಂಬಿ ಹೋಗಿದೆ.


ಪ್ರಶ್ನೆ ಹಾಕಿದಷ್ಟು ವ್ಯವಧಾನ, ಉತ್ತರಗಳಿಗೆ ಇಲ್ವೇನೊ...


ಜೀವನಕ್ಕೊಂದು ಅರ್ಥ ಇರ್ಬೇಕು ನಿಜ, ಆದ್ರೆ ಒಂದೇ ಅರ್ಥ ಇರ್ಬೇಕು ಅಂತೇನೂ ಇಲ್ವಲ್ಲಾ.
ಹೊಸ ಆಯಾಮ ಹುಡುಕಬೇಕಿದೆ, ಅದಕ್ಕೂ ಮುನ್ನ ಒಂದಷ್ಟು ಕ್ಷಣಗಳನ್ನ ಕಾದಿರಿಸಬೇಕಿದೆ.


ಬೂದಿ ಆಗಿದ್ದು, ಸಾಕು ಇನ್ನು ಕೆಂಡವಾಗಬೇಕಿದೆ.....

Thursday, March 19, 2009

ಕೈ ಚಳಕ!!

ಕೆಲವು ದಿನಗಳಿಂದ..ಅಲ್ಲ ಕೆಲವು ತಿಂಗಳಿಂದ ಒಂದು ಅನಿಸಿಕೆ.ಸುಮ್ಮನೆ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತಲೇ ಇದೆ. ಈಗ ನಂದು ಅಂತಾ ಒಂದು ಘಳಿಗೆ ಸಿಗೋದೆ ಕಷ್ಟ. ಅದರಲ್ಲಿಯೇ ಅಳಿದುಳಿದ ಕ್ಷಣಗಳಲ್ಲಿ ಒಮ್ಮೊಮ್ಮೆ ಧುತ್ತನೆ ಬಂದು ಕೈಹಿಡಿದು ಕೂಡಿಸಿಯೇಬಿಡುತ್ತದೆ.

ಹಾಗೆ ಹೇಳ್ಬೆಕು ಅಂದ್ರೆ ಅಲ್ಲಿ ಇದ್ದಿದ್ದು ಮರಳು ದಿನ್ನೆ, ಉಪ್ಪು ನೀರು, ಅದೆಷ್ಟೋ ಜನಕ್ಕೆ ಒಂದು ಸಂಜೆ. ಶನಿವಾರ ಬೆಳಿಗ್ಗೆಯಿಂದ ಊರು ಸುತ್ತಿದ್ರೂ ನೀನು ಜೊತೆಗೆ ಅಂತ ಸಿಕ್ಕಿದ್ದು ಅರೆ ಕ್ಷಣದ ನೋಟದಲ್ಲಿ, ಈಗ ಅದೂ ಕಾಣದ ಕತ್ತಲೆ. ಪ್ರೀತಿ ಜೊತೆಗಿದ್ರೆ ಮೈಯೆಲ್ಲ ಬಿಸಿ, ಅದು ಇದು ಅಂತಾರೆ. ನನಗೆ ಮಾತ್ರ ಗಾಳಿ ಸೊಕಿದಲ್ಲೆಲ್ಲ ಚಳಿ, ಮಾತು ನಡುಗುವಷ್ಟು.

ಹೆಜ್ಜೆ ನೋಡ್ತಾ ನಡೀತಿದ್ರೆ ಜನರ ಗದ್ದಲ, ಬಿಡದೇ ಹೊಡೆಯುವ ಅಲೆಗಳು, ಕೊನೆಗೆ ನಿನ್ನ ಇನಿದನಿಯ ಮಾತೂ ಕೇಳದಷ್ಟು ನಿಶ್ಯಬ್ದ. ಉರುಳುವ ಪ್ರತಿ ಕ್ಷಣಗಳನ್ನು ಅದೆಷ್ಟು ಶ್ರದ್ಧೆಯಿಂದ ಎತ್ತಿಕೊಳ್ತಾ ಇದ್ದೆ ಅಂದ್ರೆ ನನಗೇ ಆಶ್ಚರ್ಯ. ಮನಸಿನಲ್ಲಿ ಹುದುಗಿರುವ ನೂರಾರು ಅರಿವಿರದ ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನ. ನಿನಗೆ ಅದು ಗೊತ್ತಾಗದೆ ಇರಲಿ ಅನ್ನೊ ಸಣ್ಣ ನಿವೇದನೆ. ಹೆಜ್ಜೆಗಳು ಜೊತೆ ಆದ ಹಾಗೆ ಸಮಯಕ್ಕೆ ಅರಿವೇ ಇದ್ದಿಲ್ಲ.

ಅದು ಯಾವ ಘಳಿಗೆಯೊ, ಇನ್ನೂ ನೆನಪಾಗುತ್ತಿಲ್ಲ, ನಮ್ಮ ಕೈಗಳು ಬೆಸೆದುಕೊಂಡಿದ್ದವು. ಸ್ನೇಹದ ಆರ್ದ್ರತೆಗೋ ಅಥವಾ ಅದನ್ನೂ ಮೀರಿದ ಧನ್ಯತಾ ಭಾವಕ್ಕೊ! ದಿನ ಮುಗೀತಾ ಇರೊ ಸಂಕಟ ಹೆಚ್ಚಿದ್ದು ಆಗಲೇ. ಕೆಲವೊಮ್ಮೆ ಅನಿಸುತ್ತೆ, ಪ್ರೀತಿ ಹುಟ್ಟಿದ್ದು ಆಗಲೇ ಅಂತ. ಅರ್ಥ ಆಗ್ಲಿಕ್ಕೆ ಅದೆಷ್ಟೋ ಸಂಜೆಗಳು ಬೇಕಾದವು ಅಷ್ಟೇ.

ಬರೆಯುವುದು ಹೇಗೆ!!?

ಜೀವನದ ಪ್ರತಿ ಅಯಾಮದಲ್ಲಿ ನಿನ್ನ ನೆರಳು ಅದೆಷ್ಟು ತುಂಬಿದೆ ಅಂದರೆ ನೀನಿಲ್ಲದ ಕ್ಷಣಗಲು ಅಪರಿಚಿತವಾಗಿವೆ. ಕಾಯುವಿಕೆಯಲ್ಲಿ ಕಳೆದ ರಾತ್ರಿಗಳು, ಕಣ್ಣಲ್ಲಿ ಆರದ ಪಸೆ, ನಕ್ಕಾಗ ಬಿಟ್ಟ ನಿಟ್ಟುಸಿರು, ಸುಮ್ಮನೆ ಮೈಮೇಲೆ ಬಿದ್ದು ಕಾಡುವ ಒಂಟಿತನವೆಲ್ಲ ನಾ ಬರೆದ ಪದಗಳ ಸಾಲುಗಳಲ್ಲೇ ಉಳಿದಿವೆ. ನನ್ನನ್ನು ಇಷ್ಟು ಆವರಿಸಿಕೊಳ್ಳುತ್ತೀಯಾ ಅಂತ ಗೊತ್ತಿತ್ತು, ಆದರೆ ನನ್ನನ್ನೇ ಮರೆಯುತ್ತೇನೆ ಅಂದು ಕೊಂಡಿರಲಿಲ್ಲ. ಪ್ರೀತಿ ಹೆಪ್ಪುಗಟ್ಟುವುದು ಹೀಗೆ ಏನೊ.

ಲೇಖನಿಗೆ ಸಾಲಿತ್ತು
ಪ್ರತಿ ಕ್ಷಣಕ್ಕೊಂದು ವಿರಾಮ
ನೆನಪಲ್ಲೆ ಸಾಗಿತ್ತು
ಕನಸುಗಳ ಸಂಭ್ರಮ

ಮಾತೆಲ್ಲ ಮರೆತಿತ್ತು
ಅರ್ಥವಿಲ್ಲದ ಮೌನ
ಕಾರಣವೇ ಬೇಕಿತ್ತು
ಹುಸಿ ಮುನಿಸಿಗೂ ಕೂಡ

ನೀ ಬಂದೆ ಏನಿತ್ತು
ಹರಿವಿರದ ಜೀವನ
ಚಿಗುರೊಡೆದು ಮರೆತಿತ್ತು
ಬೇಸಿಗೆಯ ಮುನ್ನ

ಮುಂಜಾನೆ ಮೋಡ
ಸಂಜೆಗೊಂದು ತುಂತುರು
ದಿನವೆಲ್ಲ ಹಸಿರೆ
ಮನಸೆಲ್ಲ ತಂಪು

ಎದೆ ಗೂಡಿನ ತುಂಬ
ನಿನದೆ ಚಿತ್ತಾರ
ಪದಗಳೆಲ್ಲ ಮರೆತು
ಬರಲಾರವು ಹತ್ತಿರ

ಬರೆದಿದ್ದೆಲ್ಲ ಮೌನಕ್ಕೆ ಮುಗಿದಿವೆ, ಮಾತುಗಳಿಗೆ ಹುಡುಕಬೇಕು.

Thursday, February 22, 2007

ಇದೇ ಮೊದಲಾ..!!

ಮನಸ್ಸಿಗೊಂದು ನೆಮ್ಮದಿ, ಇಷ್ಟು ಸರಾಗವಾಗಿ ಇಷ್ಟೊಂದು ಹೇಗೆ ಆಗ್ತದೋ ಅಂತ ಒಂದು ಆತಂಕ ಇದ್ದೇ ಇತ್ತು.
ಮನಸ್ಸು ಅಷ್ಟೊಂದು ಭಾವನೆಗಳಿಗೆ ಹೇಗೆ ಸ್ಪಂದಿಸ್ತೋ.. ಲೆಖ್ಖ ಹಾಕುವಷ್ಟರಲ್ಲಿ ಮತ್ತೆ ಅಲ್ಲಿಂದ ದೂರ....

ನೆನಪುಗಳ ಹೆಕ್ಕಿಕೊಳ್ತಾ ಕುತ್ಗೊಂಡಿದೀನಿ.


ನಿನ್ನ ಯಾವಾಗ ನೋಡ್ತೀನೊ ಅನ್ನೊ ಧಾವಂತದಲ್ಲಿ ನಿನ್ನೆಡೆಗೆ ಬಂದಿದ್ದೆ. ನಿನ್ನಲ್ಲೆ ಉಳಿದುಕೊಂಡು ಬಿಟ್ಟೆ.
ಬಿಟ್ಟು ಬರುವಾಗ ಮನಸೆಷ್ಟು ರೊಚ್ಚಿಗೆದ್ದಿತ್ತು ಅಂದ್ರೆ, ಎನು ಮಾಡ್ಬೇಕು ಅಂತಾ ಹೊಳೀತಾನೆ ಇದ್ದಿಲ್ಲ.
ನಿನ್ನ ಜೊತೆ ಕಳೆದ ಕೆಲವು ಕ್ಷಣಗಳು ಅದೆಲ್ಲೊ ಕನಸಿನಲ್ಲಿ ನಡೆದಂಗಿದೆ.

ಮತ್ತೆ ರಾತ್ರಿಯ ಒಂಟಿತನದ ಎಕತಾನತೆಯ ನಿಶ್ಯಬ್ದ ಮಗ್ಗುಲುಗಳು. ನಡೆವ ದಾರಿಯಲ್ಲಿ ಜೊತೆ ಅರಸುವ ತಣ್ಣನೆ ಕೈಗಳು.
ನಿಟ್ಟುಸಿರಾಗಿದ್ದಕ್ಕೆ ಕಣ್ಣೀರೆ ಲೆಖ್ಖ ಇಡಬೇಕು...

ಒಂದು ಕ್ಷಣ ನೀನೆ
ಸುತ್ತ ಮತ್ತೇನಿದೆ

ನಾನು ಹುಡುಕುತಲಿದ್ದೆ
ನೀನೆಲ್ಲೊ ನಕ್ಕಂಗಿತ್ತು
ಕತ್ತಲೆ ತುಂಬಿದೆ
ತಾಕಿದ್ದು ನಿನ್ನ ಉಸಿರಾ..?

ಮೈಯಲ್ಲಿ ಸಣ್ಣ ನಡುಕು
ಬೆವೆತಷ್ಟೂ ಚಳಿ
ಸಣ್ಣಗೆ ಹೊರಳಿ
ನಿನ್ನ ತಡವುತ್ತೇನೆ

ಸಿಕ್ಕಷ್ಟು ಖಾಲಿ
ತಬ್ಬಿಕೊಳ್ಳೋಕೆ ಏನಿತ್ತು
ನೆನಪೊಂದು ತಣ್ಣಗೆ
ಕಣ್ಣೀರಾಗಿತ್ತು

ಹೇಗನಿಸುತ್ತದೆ ಈಗ
ಕಳೆದಿದ್ದು ಸಿಕ್ಕಂಗಾ
ಅದಕ್ಕೆಲ್ಲ ಲೆಖ್ಖವಿಲ್ಲ
ಕಳೆದಿದ್ದೆಷ್ಟು..?

.......

Friday, November 10, 2006

ಇಂದು ಮುಂಜಾವಿನಲಿ!!!!

ಈಗೆಲ್ಲ ಚಳಿ ಜಾಸ್ತಿ. ಮುಸುಕು ಹಾಕಿ ಮಲಗಿದಷ್ಟು ಕನಸು ಮುದ್ದುಗರೆಯುತ್ತವೆ. ಮುಂಜಾನೆಯ ಸೂರ್ಯನ ತಿಳಿಬಿಸಿಲು ನಿನ್ನ ಬಿಸಿ ಅಪ್ಪುಗೆಯ ನೆನಪಾಗಿಸುತ್ತದೆ.

ಮುಂಚೆ ಎಲ್ಲ ನಿದ್ದೆ ಬಿಟ್ಟು ಏಳೋದು ಅಂದ್ರೆ ಕಿರಿಕಿರಿಯೆ. ಆದರೆ ಈಗೆಲ್ಲ ಅದೊಂದು ಸಂಭ್ರಮ ಅನಿಸುತ್ತದೆ. ಆ ಮಂಜು ಮುಸುಕಿದ ದಾರಿಯಲ್ಲಿ ಸುಮ್ಮನೆ ನಡೆದಾಡುವಾಗೆಲ್ಲ ನಿನ್ನ ಉಸಿರಿನ ಸ್ಪರ್ಷ ಅದೆಷ್ಟು ಬಾರಿ ಕಚಗುಳಿ ಇಟ್ಟಿದೆಯೋ!!

ಹುಲ್ಲು ಹಾಸಿನ ಮೇಲೆ ನಲಿವ ಆ ಇಬ್ಬನಿಯ ಕಣಗಳೆಲ್ಲ ನಿನ್ನ ನಗುವಾಗಿ ಮಿನುಗುತ್ತವೆ. ಆ ಹರಿವ ಝರಿ ಮಾಡುವ ಕಲರವ ನಿನ್ನ ಮಾತಾಗುತ್ತದೆ. ನಡೆಯುವ ಆಯಾಸವನ್ನೆಲ್ಲ ನಿನ್ನ ಹೆಗಲಿಗೊರಗಿಸಿ ಬಿಸಿಲು ಕಾಯಿಸುತ್ತೇನೆ.


ಇವತ್ತು ಬೆಳಿಗ್ಗೆ ಏಳ್ತಾ ಇದ್ದಂಗೆ ಒಂದು ಕನಸು! ದೂರದಲ್ಲೆಲ್ಲೊ ಸಾಗರದ ಅಲೆಗಳ ಅಬ್ಬರ. ಕಾಡಿನ ಕಾಲು ದಾರಿಯಲ್ಲಿ ನಿನ್ನ ಜೊತೆ ನಡೆಯುತ್ತಿರುವ ಹಾಗೆ. ನೀನು ಗಿಡ ಮರ ತೋರಿಸುತ್ತ ಮುನ್ನಡೆಯುತ್ತ ಇದ್ದೆ. ನಾನು ನಿನ್ನ ಹೆಗಲ ಮೇಲೆ ನನ್ನ ಎರಡೂ ಕೈ ಇಟ್ಟು ನಿನ್ನ ಹಿಂಬಾಲಿಸ್ತಾ ಇದೀನಿ. ನೀನು ಹಿಂದೆ ತಿರುಗಿದಾಗಲೆಲ್ಲ ನಿನ್ನ ಗಲ್ಲದ ಸ್ಪರ್ಷದಿಂದ ನನ್ನ ಕೈ ನವಿರೇಳುತ್ತಿದೆ. ಸುಮ್ಮನೆ ನಿನ್ನ ಹಾಡಿನ ಗುನುಗು ಮನಸೆಲ್ಲ ತುಂಬುತ್ತಿದೆ. ಆ ದಾರಿ ಕೊನೆಯಿಲ್ಲದಂತೆ ಹರಿಯುತ್ತಿದೆ. ಕಣ್ಣು ತೆರೆದು ಕನಸನರಿಯುವ ಮನಸಾಗುತ್ತಿಲ್ಲ.

ಇದು ಹೀಗೆ ಇರಲಿ!!